ದಕ್ಷಿಣ ಕ್ಯಾರಲೈನ -
ಅಮೆರಿಕ ಸಂಯುಕ್ತ ಸಂಸ್ಥಾನಗಳ 13 ಮೂಲ ರಾಜ್ಯಗಳ ಪೈಕಿ ಒಂದು.   ಅಟ್ಲಾಂಟಿಕ್ ಸಾಗರ ತೀರದ ಈ ರಾಜ್ಯದ ಉತ್ತರ ಮತ್ತು ಈಶಾನ್ಯದಲ್ಲಿ ಉತ್ತರ ಕ್ಯಾರಲೈನ; ಪೂರ್ವ ಹಾಗೂ ಆಗ್ನೇಯದಲ್ಲಿ ಅಟ್ಲಾಂಟಿಕ್ ಸಾಗರ; ದಕ್ಷಿಣ, ನೈಋತ್ಯ ಹಾಗು ಪಶ್ಚಿಮದಲ್ಲಿ ಜಾರ್ಜಿಯ ಇವೆ. ಸವಾನ ನದಿ ಜಾರ್ಜಿಯಕ್ಕೂ ಈ ರಾಜ್ಯಕ್ಕೂ ನಡುವಣ ಸ್ವಾಭಾವಿಕ ಗಡಿಯಾಗಿದೆ.   ರಾಜ್ಯದ ವಿಸ್ತೀರ್ಣ 80,432 ಕಿಮೀ.  (31,055 ಚ.ಮೈ.). ಜನಸಂಖ್ಯೆ 25,90,516 (1970).  ರಾಜಧಾನಿ ಕೊಲಂಬಿಯ.

ಮೇಲ್ಮೈ ಲಕ್ಷಣ :  ದಕ್ಷಿಣ ಕ್ಯಾರಲೈನ ಭೌಗೋಳಿಕವಾಗಿ ಕರಾವಳಿ ಬಯಲು, ಪೀಡ್‍ಮಾಂಟ್ ಪ್ರಸ್ಥಭೂಮಿ, ಬ್ಲೂ ರಿಡ್ಜ್ ಪರ್ವತ ಪ್ರದೇಶ ಎಂದು ಮೂರು ಭಾಗಗಳಾಗಿ ವಿಂಗಡಿಸಬಹುದು.  ಅಟ್ಲಾಂಟಿಕ್ ತೀರದಿಂದ ಪೀಡ್ ಮಾಂಟ್ ಪ್ರದೇಶದವರೆಗೆ ಸುಮಾರು 120 - 150 ಮೈ.  ರಾಜ್ಯದ ಕರಾವಳಿ ಬಯಲ ರಾಜ್ಯದ 2/3 ಭಾಗವನ್ನು ಆವರಿಸಿಕೊಂಡಿದೆ.  ರಾಜ್ಯದ ಪೂರ್ವ ಮತ್ತು ಆಗ್ನೇಯದಲ್ಲಿ  190 ಮೈ.  ಸಮುದ್ರತೀರವಿದೆ.  ಕಡಲಕೆರೆಯ ನೆಲ ಜೌಗಿನಿಂದ ಕೂಡಿ ತಗ್ಗಾಗಿದೆ.  ಸಮುದ್ರದ ಅಂಚಿನಲ್ಲಿ ನದಿಗಳು ತಂದು ಹಾಕಿದ ಹೂಳಿನಿಂದ ಸೃಷ್ಟಿಯಾದ ಕಿರುದ್ವೀಪಗಳಿವೆ.  ಇವುಗಳ ಪೈಕಿ  ಪ್ರಧಾನವಾದುವು, ಎಡಿಸ್ಟೋ, ಪೋರ್ಟ್ ರಾಯಲ್, ಸೇಂಟ್ ಹೆಲೀನ ಹಾಗೂ ಪ್ಯಾರಸ್.  ಸಮುದ್ರದ ಉಪ್ಪುನೀರಿನಿಂದ ಕೂಡಿದ ನದಿಗಳು ಒಳನಾಡಲ್ಲಿ ಸುಮಾರು 500 ಮೈ. ವರೆಗೆ ಜಲಯಾನಕ್ಕೆ ಅನುಕೂಲವಾಗಿವೆ.  ಸಮುದ್ರತೀರ ಬಯಲಿಗೂ ಪೀಡ್‍ಮಾಂಟ್‍ಗೂ ನಡುವೆ ಇರುವ 10ಮೈ.  ಅಗಲದ ಪ್ರದೇಶ ಇಳಿಜಾರಿನ ವಲಯ.  ಇಲ್ಲಿ ನದಿಗಳು ವೇಗವಾಗಿ ಹರಿಯುತ್ತವೆ.  ಪೀಡ್‍ಮಾಂಟ್‍ನ್ನು ಪ್ರಸ್ಥಭೂಮಿಯೆಂದು ಕರೆಯಲಾಗಿದೆಯಾದರೂ ವಾಸ್ತವವಾಗಿ ಇದು ನಗ್ನೀಕರಣಕ್ಕೊಳಗಾದ ಮೈದಾನ.  ಅನೇಕನದಿಗಳು ಇದನ್ನು ಅಲ್ಲಲ್ಲಿ ಕತ್ತರಿಸಿ ಪ್ರಪಾತಗಳನ್ನು ಸೃಷ್ಟಿಸಿವೆ.  ಇಲ್ಲಿ ಅನೇಕ ಜಲಪಾತಗಳಿವೆ. ದಕ್ಷಿಣ ಕ್ಯಾರಲೈನದ ಅನೇಕ ಹೆದ್ದಾರಿಗಳು, ಪಟ್ಟಣಗಳು, ರೈಲು ಮಾರ್ಗಗಳು ಹಾಗೂ ವ್ಯವಸಾಯದ ಜಮೀನುಗಳು ಪೀಡ್‍ಮಾಂಡ್ ಪ್ರದೇಶದಲ್ಲಿವೆ.  ಬ್ಲೂ ರಿಡ್ಜ್ ಪರ್ವತ ಪ್ರದೇಶ ಪೀಡ್‍ಮಾಂಟಿನ ಅತ್ಯುನ್ನತ ಪ್ರದೇಶಕ್ಕಿಂತ 1,000 - 2,000 ಅಡಿ ಎತ್ತರವಾಗಿದೆ.  ರಾಜ್ಯದ ಅತ್ಯಂತ ಎತ್ತರವಾದ ಶಿಖರ ಸ್ಯಾಸಫ್ರ್ಯಾಸ್ (3,560 ಅಡಿ).

ಪೀಡೀ ನದಿ ಉತ್ತರ ಕ್ಯಾರಲೈನ ರಾಜ್ಯದ ದಕ್ಷಿಣ ಗಡಿಯಿಂದ ದಕ್ಷಿಣ ಕ್ಯಾರಲೈನಕ್ಕೆ ಹರಿದು ಬಂದು, ವಿನ್ಯಾ ಕೊಲ್ಲಿಯಲ್ಲಿ ಅಟ್ಲಾಂಟಿಕ್ ಸಾಗರವನ್ನು ಸೇರುತ್ತದೆ.  ರಾಜ್ಯ ಮಧ್ಯಬಾಗದಲ್ಲಿ ವಾಟರೀ  ಮತ್ತು ಕಾಂಗರೀ ನದಿಗಳ ಸಂಗಮದಿಂದ ಉಂಟಾದ ಸ್ಯಾಂಟೀ ನದಿಯೂ ರಾಜ್ಯದ ದಕ್ಷಿಣ ಭಾಗದಲ್ಲಿ ಹರಿಯುವ ಎಡಿಸ್ಟನ್ ನದಿಯೂ ಆಗ್ನೇಯಾಭಿಮುಖವಾಗಿ ಹರಿದು ಅಟ್ಲಾಂಟಿಕ್ ಸಾರವನ್ನು ಸೇರುತವೆ. ಸವಾನ ನದಿ ರಾಜ್ಯದ ನೈಋತ್ಯ ಗಡಿಯಾಗಿ ಹರಿಯುತ್ತದೆ.   ಅನೇಕ ನದಿಗಳೂ ಪೀಡ್‍ಮಾಂಟ್‍ಗೂ ಮೈದಾನಕ್ಕೂ ನಡುವಣ ಇಳಿಜಾರಿನ ವರೆಗೆ ಜಲಯಾನಕ್ಕೆ ಅನುಕೂಲವಾಗಿವೆ.  ದಕ್ಷಿಣ ಕ್ಯಾರಲೈನದಲ್ಲಿ ದೊಡ್ಡ ನೈಸರ್ಗಿಕ ಸರೋವರಗಳಿಲ್ಲ.  ಸಮುದ್ರತೀರದ ತಗ್ಗುಭೂಮಿಯಲ್ಲಿ ನೀರು ತುಂಬಿ ಅನೇಕ ಹೊಂಡಗಳಾಗಿವೆ.

ವಾಯುಗುಣ :  ರಾಜ್ಯದ ವಾಯುಗುಣ ಸಾಮಾನ್ಯವಾಗಿ ಹಿತಕರ.  ಬೇಸಗೆಯ ಸರಾಸರಿ ಉಷ್ಣತೆ 280 ಅ (820 ಈ); ಜನವರಿಯಲ್ಲಿ 110 ಅ (510  ಈ).  ವಾರ್ಷಿಕ ಸರಾಸರಿ ಮಳೆ 1,200 ಮಿಮೀ (48") ತೀರದ ಬಳಿಯ ದ್ವೀಪಗಳಲ್ಲಿ ಸಾಮಾನ್ಯವಾಗಿ ಉಷ್ಣವಲಯದ ವಾಯುಗುಣವಿದೆ.

ಸಸ್ಯಪ್ರಾಣಿವರ್ಗ :  ಸಮುದ್ರತೀರದ ಜವುಗು ಭಾಗದಲ್ಲಿ ಉಷ್ಣವಲಯದ ಸಸ್ಯಗಳಾದ ಪಾಮೆಟೊ, ಪೈನ್, ಸೈಪ್ರೆಸ್, ಬೇ ಹಾಗೂ ಗಮ್ ಮರಗಳೂ ಒಳನಾಡಿನಲ್ಲಿ ಪೈನ್, ಹಿಕರಿ, ಡಾಗ್ವುಡ್, ಆಷ್, ಮೇಪ್‍ಲ್. ವಾಲ್‍ನಟ್, ಮತ್ತು ಚೆಸ್‍ನಟ್ ಮರಗಳೂ ಇವೆ.  ಜವುಗು ಪ್ರದೇಶದಲ್ಲಿ ಮೊಸಳೆ ಮತ್ತು ವಿಷಸರ್ಪಗಳುಂಟು.  ರಾಜ್ಯದ ಮುಖ್ಯಪ್ರಾಣಿಗಳು ವರ್ಜಿನಿಯ ಜಿಂಕೆ, ಕಾಡು, ಹಂದಿ, ಕಾಡು ಟರ್ಕಿಕೋಳಿ.  ವಿವಿಧ ಕಡಲ ಹಕ್ಕಿಗಳೂ ಸಮುದ್ರದಲ್ಲಿ ಹಲವು ಬಗೆಯ ಮೀನುಗಳೂ ಏಡಿ, ಆಮೆ, ಷಾರ್ಕ್‍ಗಳೂ ಉಂಟು.

ಜನ :  ದಕ್ಷಿಣ ಕ್ಯಾರಲೈನ ಭಾಗದಲ್ಲಿ ಮೊಟ್ಟಮೊದಲು ನೆಲೆಸಿದವರು.  ಸ್ಪೇನ್, ಇಂಗ್ಲೆಂಡ್, ಮತ್ತು ಐರ್ಲೆಂಡ್ ಜನ.  1671 ರಲ್ಲಿ ನ್ಯೂಯಾರ್ಕಿನಿಂದ ಡಚ್ ಜನರ ತಂಡವೊಂದು ಇಲ್ಲಿಗೆ ಬಂದು ನೆಲೆಸಿತು.  1685 ರಲ್ಲಿ ಫ್ರಾನ್ಸಿನಿಂದ ಅನೇಕ ಜನ ಬಂದು ನೆಲೆಸಿದರು.  1670 ರಲ್ಲಿ 5 ಮಂದಿ ನೀಗ್ರೋಗಳು ಗುಲಾಮರಾಗಿ ಇಲ್ಲಿಗೆ ಬಂದರು.  1970 ರಲ್ಲಿ  ನಿಗ್ರೋಜನರ ಸಂಖ್ಯೆ ಇಲ್ಲಿಯ ಜನಸಂಖ್ಯೆ ಸೇಕಡ 30 ರಷ್ಟಿತ್ತು.  ದಕ್ಷಿಣ ಕ್ಯಾರಲೈನದಲ್ಲಿ ಯೂರೋಪಿನಿಂದ ಬಂದ ನಾನಾ ಭಾಷಾ ಜನರ ಸಂಮಿಶ್ರಣವಾಗಿದ್ದರೂ ಇಲ್ಲಿಯ ಪ್ರಧಾನ ಭಾಷೆ ಇಂಗ್ಲಿಷ್. ರಾಜ್ಯದ  ಜನರು ಕ್ಯಾತೊಲಿಕ್ ಹಾಗೂ ಪ್ರಾಟೆಸ್ಟಂಟ್ ಕ್ರೈಸ್ತರು. ಕ್ಯಾರಲೈನದ ಪ್ರಮುಖ ಪಟ್ಟಣಗಳು ಇವು; ಕೊಲಂಬಿಯ (ರಾಜಧಾನಿ) (1,13,542) (1970), ಜಾಲ್ರ್ಸ್‍ಟನ್ (66,945), ಗ್ರೀನ್‍ವಿಲ್ (61,438), ಸ್ಪಾರ್ಟನ್‍ಬರ್ಗ್ (44,456), ಮತ್ತು ರಾಕ್ ಹಿಲ್ (6,815).

ಇತಿಹಾಸ :  ದಕ್ಷಿಣ ಕ್ಯಾರಲೈನದ ಈಗಿನ ಪೋರ್ಟ್ ರಾಯಲ್ ಪ್ರದೇಶಕ್ಕೆ ಮೊದಲು ಬಂದವರು ಸ್ಪೇನ್ ನಾವಿಕರು (1520). 1562 ನೆಯ ಮೇ 27 ರಂದು ಜೇನ್ ರೇಬಾಲ್ಟ್‍ನ ನಾಯಕತ್ವದಲ್ಲಿ ಬಂದ ಫ್ರೆಂಚ್ ಹ್ಯೂಗೆನೋ ಧಾರ್ಮಿಕ ಪಂಥದ ತಂಡ ಪೋರ್ಟ್ ರಾಯಲ್ ಬಳಿ ಕೋಟೆಯನ್ನು ಕಟ್ಟಿ, ಫ್ರಾನ್ಸಿನ ದೊರೆ ಚಾಲ್ರ್ಸ್‍ನ ಹೆಸರಿನಲ್ಲಿ ಅದಕ್ಕೆ ಆಕ್ರ್ಸ್ ಕ್ಯಾರಲೈನ ಎಂಬ ಹೆಸರಿಟ್ಟರು.  ಮರು ವರ್ಷ ಸ್ಥಳೀಯ ಬಣಗಳು ಈ ಕೋಟೆಯನ್ನು ಸುಟ್ಟುಹಾಕಿದಾಗ ವಲಸೆಗಾರರು ತಮ್ಮ ನೆಲೆಯನ್ನು ಬಿಟ್ಟು ಫ್ರಾನ್ಸ್ ದೇಶಕ್ಕೆ ಹಿಂದಿರುಗಿದರು.  ನಾವಿಕ ಜಾನ್ ಕ್ಯಾಬಟ್ ಇಂಗ್ಲೆಂಡಿನ ಪರವಾಗಿ ಕ್ಯಾರಲೈನ ಭಾಗವನ್ನು ಕಂಡುಹಿಡಿದಾಗ ಇಂಗ್ಲೆಂಡಿನ  1 ನೆಯ ಚಾಲ್ರ್ಸ್ ತನ್ನ ಪ್ರಧಾನ ವಕೀಲ ಸರ್ ರಾಬರ್ಟ್ ಹೀತ್ ಎಂಬಾತನಿಗೆ ಇಲ್ಲಿಯ ಕೆಲವು ಪ್ರದೇಶಗಳನ್ನು ಸನ್ನದಿನ ಮೂಲಕ ನೀಡಿದ (1629).  ರಾಬರ್ಟ್ ಹೀತ್ ಅದನ್ನು ಉಪಯೋಗಿಸಿಕೊಳ್ಳಲಿಲ್ಲ.  ಎರಡನೆಯ ಚಾಲ್ರ್ಸ್ ತನಗೆ ಬೇಕಾದವರಿಗೆ ಇದನ್ನು ಮತ್ತೆ ಹಂಚಿದ.  1670 ರ ವೇಳೆ ಇಲ್ಲಿ ವಸಾಹತು ಸ್ಥಾಪನೆಯಾಯಿತು.  1680 ರಲ್ಲಿ ವಲಸೆಗಾರರು ಈಗಿನ ಚಾಲ್ರ್ಸ್‍ಟನ್ ಇರುವ ಸ್ಥಳಕ್ಕೆ ತಮ್ಮ ವಸತಿಯನ್ನು ಬದಲಾಯಿಸಿದರು.  ಆ ಪ್ರದೇಶದ ಮೇಲೆ ಒಡೆತನ ಸ್ಥಾಪಿಸಿದ್ದವರ ಆಳ್ವಿಕೆಯನ್ನು 1719 ರಲ್ಲಿ ತಳ್ಳಿಹಾಕಲಾಯಿತು.  1729 ರಲ್ಲಿ  ಇಂಗ್ಲೆಂಡಿನ ದೊರೆಯ ಆಳ್ವಿಕೆ ಆರಂಭವಾಯಿತು. ಚಾಲ್ರ್ಸ್‍ಟನ್ ಒಂದು ವಾಣಿಜ್ಯ ಕೇಂದ್ರವಾಯಿತು.

ವಲಸೆಗಾರರು ಇಲ್ಲಿಗೆ ನೀಗ್ರೋ ಗುಲಾಮರನ್ನು ತಂದರು.  ಬೇಸಾಯದ ನೆಲದಲ್ಲಿ ಕೆಲಸಮಾಡುವ ನೀಗ್ರೋಗಳ ಸಂಖ್ಯೆ 1720 ರ ಹೊತ್ತಿಗೆ 12,000 ಆಗಿತ್ತು.  ಆಗ ಇಲ್ಲಿದ್ದ ಬಿಳಿಯರ ಸಂಖ್ಯೆ 9,000. ದಕ್ಷಿಣ ಕ್ಯಾರಲೈನದ ಜನಸಂಖ್ಯೆ ಕ್ರಮಕ್ರಮವಾಗಿ ಏರತೊಡಗಿತು.  ಅಮೆರಿಕದ ಕ್ರಾಂತಿಯುದ್ಧದ ವೇಳೆಗೆ ಏಳುಮಡಿಯಾಯಿತು.  ಇಲ್ಲಿದ್ದ ಸ್ಥಳೀಯ ಇಂಡಿಯನ್ ಜನರೊಂದಿಗೆ ಘರ್ಷಣೆ ಬೆಳೆಯಿತು.  ಅಂತಿಮವಾಗಿ ಅವರು ಬಿಳಿಯರಿಗೆ ಮಣಿಯಬೇಕಾಯಿತು.  ಹಲವರು ಅಲ್ಲಿಂದ ಸರಿದರು.  ಅನೇಕರು ನಾಶಹೊಂದಿದರು.

ಇಂಗ್ಲಿಷರ ವಿರುದ್ಧ ಅಮೆರಿಕ ನಡೆಸಿದ ಕ್ರಾಂತಿಯುದ್ಧ ದಕ್ಷಿಣ ಕ್ಯಾರಲೈನದ ಬೇಸಾಯಗಾರ ಜನರ ಮೇಲೆ ಹೆಚ್ಚು ಪ್ರಭಾವ ಬೀರಲಿಲ್ಲ;  ಅವರು ಇಂಗ್ಲೆಂಡಿನ ಬಗ್ಗೆ ನಿಷ್ಠರಾಗಿಯೇ ಇದ್ದರು.  ಆದರೆ, ಸ್ವಾತಂತ್ರ್ಯಕ್ಕಾಗಿ ಹೋರಾಟಕ್ಕೆ ನಿಂತ ಮೇಲೆ ಅವರು ಕ್ರಾಂತಿಗೆ ಬೆಂಬಲ ನೀಡಿ 1774 ರಲ್ಲಿ ಬಾಸ್ಟನ್ ನಗರದ ಕ್ರಾಂತಿಕಾರರಿಗೆ ದ್ರವ್ಯ ಸಹಾಯ ನೀಡಿದರು ಹಾಗೂ ಕಾಂಗ್ರೆಸ್ಸಿನಲ್ಲಿ ಪ್ರಾತಿನಿಧ್ಯ ಹೊಂದಿದರು. ಪ್ರಾಂತೀಯ ಸಂವಿಧಾನವನ್ನು  ರಚಿಸಿಕೊಂಡ ಅಮೆರಿಕನ್ ರಾಜ್ಯಗಳಲ್ಲಿ ಇದೇ ಮೊದಲನೆಯದು (1776).  ಕ್ರಾಂತಿಯುದ್ಧ ಕಾಲದಲ್ಲಿ ಹೆನ್ರಿ ಕ್ಲಿಂಟನ್ ಮತ್ತು ಪೀಟರ್ ಪಾರ್ಕರ್-ಈ ಇಬ್ಬರು ಬ್ರಿಟಿಷ್ ಸೇನಾನಿಗಳು ಚಾಲ್ರ್ಸ್‍ಟನ್ ಪಟ್ಟಣವನ್ನು ಆಕ್ರಮಿಸಿಕೊಳ್ಳಲು ಪ್ರಯತ್ನಿಸಿ ವಿಫಲರಾದರು.  1780 ರಲ್ಲಿ ಚಾಲ್ರ್ಸ್‍ಟನ್ ಬ್ರಿಟಿಷರ ವಶವಾಯಿತು.  ಕ್ರಾಂತಿ ಕಾಲದಲ್ಲಿ ದಕ್ಷಿಣ ಕ್ಯಾರಲೈನದ ಇನ್ನೂ ಕೆಲವು ಎಡೆಗಳಲ್ಲಿ ಕದನಗಳಾದುವು.

1786 ರಲ್ಲಿ ದಕ್ಷಿಣ ಕ್ಯಾರಲೈನದ ಆಡಳಿತಕೇಂದ್ರ ಚಾಲ್ರ್ಸ್‍ಟನ್‍ನಿಂದ ಕೊಲಂಬಿಯಕ್ಕೆ  ವರ್ಗವಾಯಿತು.  1788 ಮೇ 23 ರಂದು ರಾಜ್ಯದ ಸಾಮಾನ್ಯ ಸಭೆ ಒಕ್ಕೂಟ ಸಂವಿಧಾನವನ್ನು ಅಂಗೀಕರಿಸಿತು.  ಆದರೆ 1832ರ ಹೊತ್ತಿಗೆ ಕೇಂದ್ರ ಸರ್ಕಾರ ವಿಧಿಸುತ್ತಿದ್ದ ಸುಂಕಗಳು ತನ್ನ ವ್ಯವಸಾಯ ಹಿತಾಸಕ್ತಿಗಳಿಗೆ ಪ್ರತಿಕೂಲವಾಗಿವೆಯೆಂದು ರಾಜ್ಯ ಭಾವಿಸಿ ಅದನ್ನು ವಿರೋಧಿಸಿತು.  ಕಾಂಗ್ರೆಸ್ ತೆರಿಗೆಗಳನ್ನು ಕಡಿಮೆ ಮಾಡಬೇಕಾಯಿತು.  ಅಮೆರಿಕ ಸಂಯುಕ್ತ ಸಂಸ್ಥಾನಗಳ ಪ್ರಾರಂಭದ ರೈಲುಮಾರ್ಗಗಳ ಪೈಕಿ ಕೆಲವು ದಕ್ಷಿಣ ಕ್ಯಾರಲೈನದಲ್ಲೂ ರಚನೆಯಾದುವುದು (1830 - 32)

ರಾಜಕೀಯ ಹಕ್ಕುಗಳನ್ನು ಸಾಧಿಸಿಕೊಳ್ಳಲು ಹಾಗೂ ಗುಲಾಮರಿಂದ ದುಡಿಸಿಕೊಳ್ಳುವ ಪದ್ಧತಿಯನ್ನು ಉಳಿಸಿಕೊಳ್ಳಲು ಮುಂದಾದ ದಕ್ಷಿಣದ ಹನ್ನೊಂದು ರಾಜ್ಯಗಳಿಗೂ ಒಕ್ಕೂಟ ರಾಜ್ಯಗಳಿಗೂ ನಡುವೆ 1861 - 65 ರಲ್ಲಿ ಅಮೆರಿಕದಲ್ಲಿ ಅಂತರ್ಯುದ್ಧ ನಡೆಯಿತು.  ಒಕ್ಕೂಟದಿಂದ ಪ್ರತ್ಯೇಕವಾಗಬೇಕೆಂಬ ಚಳವಳಿಯಲ್ಲಿ ದಕ್ಷಿಣ ಕ್ಯಾರಲಯನ ಪ್ರಧಾನ ಪಾತ್ರ ವಹಿಸಿತು.  ಒಕ್ಕೂಟ ಸೈನ್ಯ 1861 ರ ಏಪ್ರಿಲ್ 12 ಮತ್ತು 13 ರಂದು ಚಾಲ್ರ್ಸ್‍ಟನ್ ಮೇಲೆ ದಾಳಿಮಾಡಿತು.  ಈ ಘಟನೆಯೊಂದಿಗೆ ಅಂತರ್ಯುದ್ಧ ಪ್ರಾರಂಭವಾಗಿ ಯುದ್ಧದ ಕೊನೆಯ ಹಂತದಲ್ಲಿ (1865 ಫೆಬ್ರವರಿ) ಒಕ್ಕೂಟ ಸೈನ್ಯ ದಕ್ಷಿಣ ಕ್ಯಾರಲೈನವನ್ನು ಪ್ರವೇಶಿಸಿ ಅದಕ್ಕೆ ಅಪಾರ ನಷ್ಟವುಂಟುಮಾಡಿತು.  ಈ ಯುದ್ಧದ ತರುವಾಯ ದಕ್ಷಿಣ ಕ್ಯಾರಲೈನ ಒಕ್ಕೂಟ ಸಂವಿಧಾನದ 14 ನೆಯ ತಿದ್ದುಪಡಿಯನ್ನು ಅಂಗೀಕರಿಸಲಿಲ್ಲವಾಗಿ ಆ ರಾಜ್ಯದಲ್ಲಿ 12 ವರ್ಷಗಳ ಕಾಲ ಸೈನಿಕ ಸರ್ಕಾರ ಏರ್ಪಟ್ಟಿತು.  ನೀಗ್ರೋ ಜನರ ಮತದಾನದ ಹಕ್ಕನ್ನು 1868 ರಲ್ಲಿ ರಾಜ್ಯ ಅನುಮೋದಿಸಿತು; ಅದೇ ವರ್ಷ ಜನವರಿ 25 ರಂದು ರಾಜ್ಯ ಅಮೆರಿಕ ಒಕ್ಕೂಟಕ್ಕೆ ಪುನಃ ಸೇರಿತು.

1886 ಆಗಸ್ಟ್ 31 ರಂದು ಸಂಭವಿಸಿದ ಭೂಕಂಪದಿಂದ ಚಾಲ್ರ್ಸ್‍ಟನ್ ಪಟ್ಟಣಕ್ಕೆ ಭಾರಿ ನಷ್ಟವುಂಟಾಯಿತು.  1893 ರ ಬಿರುಗಾಳಿಯಿಂದ ಸುಮಾರು 1,000 ಮಂದಿ ತೀರಿಕೊಂಡರು.  ಒಂದನೆಯ ಮಹಾಯುದ್ಧದಲ್ಲಿ (1914 - 18) ದಕ್ಷಿಣ ಕ್ಯಾರಲೈನ ಮಿತ್ರರಾಷ್ಟ್ರಗಳ ಪರವಾಗಿ 68,489 ಸೈನಿಕರನ್ನು ಕಳುಹಿಸಿತು; ಅವರಲ್ಲಿ 2,085 ಮಂದಿ ರಣರಂಗದಲ್ಲಿ  ಮಡಿದರು.  ಎರಡನೆಯ ಮಹಾಯುದ್ಧ ಕಾಲದಲ್ಲಿ (1939 - 45) ಇದು ಮಿತ್ರ ರಾಷ್ಟ್ರಗಳ ಪರವಾಗಿ 1,88,700 ಸ್ತ್ರೀ - ಪುರುಷರನ್ನು ಸೈನಿಕ ಸೇವೆಗೆ ಕಳುಹಿಸಿತು.  ಆ ಯುದ್ಧದಲ್ಲಿ ಮರಣ ಹೊಂದಿದವರು  4,200 ಮಂದಿ.

1948 ರ ತರುವಾಯ ರಾಜ್ಯದ ಪ್ರಜೆಗಳು ರಾಷ್ಟ್ರದ ಅಧ್ಯಕ್ಷರ ಚುನಾವಣೆಯ ಬಗ್ಗೆ ಡೆಮೊಕ್ರಾಟಿಕ್ ಅಭ್ಯರ್ಥಿಗಳನ್ನು ತ್ಯಜಿಸುತ್ತ ಬಂದರು.   ದಕ್ಷಿಣದ ಇತರ ರಾಜ್ಯಗಳಂತೆ ದಕ್ಷಿಣ ಕ್ಯಾರಲೈನದಲ್ಲೂ ರಾಜ್ಯ ಹಾಗೂ ರಾಷ್ಟ್ರೀಯ ಪಕ್ಷ - ಇವುಗಳ ನಡುವೆ ಸಾಮರಸ್ಯವಿರಲಿಲ್ಲ.  ದಕ್ಷಿಣ ರಾಜ್ಯಗಳ ಮಿತವಾದಿಗಳು ನೀಗ್ರೋಗಳ ನಾಗರಿಕ ಹಕ್ಕುಗಳ ಚಳವಳಿಗೆ ವಿರುದ್ಧವಾಗಿದ್ದರು.  ದಕ್ಷಿಣ ಕ್ಯಾರಲೈನದಲ್ಲೂ ಆಗಾಗ್ಗೆ ಗಲಭೆಗಳಾಗುತ್ತಿದ್ದುವು.  1970 ರ ಪ್ರಾರಂಭದ ಹೊತ್ತಿಗೆ ರಾಜ್ಯ ತನ್ನ ಕಾರ್ಯನೀತಿಯನ್ನು ಬದಲಾಯಿಸಿ ಜನಾಂಗ ಪಕ್ಷಪಾತದ ವಿರುದ್ಧ ಒಕ್ಕೂಟ ಸರ್ಕಾರ ಜಾರಿಗೆ ತಂದ ಕಾಯಿದೆಗಳನ್ನು ಪಾಲಿಸುತ್ತ ಬಂದಿದೆ.

ಆಡಳಿತ : ರಾಜ್ಯದ 1895 ರ ಸಂವಿಧಾನದ ಪ್ರಕಾರ ಆಡಳಿತ ವ್ಯವಸ್ಥೆಗೊಂಡಿದೆ.  ರಾಜ್ಯದ ಪ್ರಮುಖನಾದ ಗವರ್ನರನ ಅಧಿಕಾರಾವಧಿ 4 ವರ್ಷ.  ಲೆಫ್ಟೆನೆಂಟ್ - ಗವರ್ನರ್ ರಾಜ್ಯದ ಸೆನೆಟ್ ಸಭೆಯ ಅಧ್ಯಕ್ಷ.  ವಿಧಾಯಕಾಧಿಕಾರ ಸಾಮಾನ್ಯ ಸಭೆಯಲ್ಲಿ ನಿಹಿತವಾಗಿದೆ.  ಇದರ ಮೇಲ್ಮನೆ ಸೆನೆಟ್; ಸೆನೆಟ್ ಸದಸ್ಯರು 46;  ಅವರ ಅಧಿಕಾರಾವಧಿ 4 ವರ್ಷ.  ಕೆಳಮನೆ ಪ್ರತಿನಿಧಿ ಸಭೆ (ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್); ಅದರ ಸದಸ್ಯರು 124; ಅವರ ಅಧಿಕಾರಾವಧಿ 2 ವರ್ಷ.  ನ್ಯಾಯಾಧಿಕಾರಗಳು ಸರ್ವೋಚ್ಛ ನ್ಯಾಯಾಲಯದಲ್ಲಿ ನಿಹಿತಗೊಂಡಿವೆ.  ಇದರಲ್ಲಿ ಒಬ್ಬ ಮುಖ್ಯ ನ್ಯಾಯಾಧೀಶ ನಾಲ್ವರು ನ್ಯಾಯಾಧೀಶರಿರುತ್ತಾರೆ.  ಇವರನ್ನು 10 ವರ್ಷದ ಅವಧಿಗೆ  ಸಾಮಾನ್ಯ ಸಭೆ ನೇಮಿಸುತ್ತದೆ.  ಸಾಮಾನ್ಯ ಮೊಕದ್ದಮೆಗಳ ನ್ಯಾಯಾಲಯಕ್ಕೆ ಸಿವಿಲ್ ಮೊಕದ್ದಮೆಗಳನ್ನು ವಿಚಾರಣೆ ಮಾಡುವ ಅಧಿಕಾರವಿದೆ.  ಸೆಷನ್ಸ್ ನ್ಯಾಯಾಲಯ ಕ್ರಿಮಿನಲ್ ಮೊಕದ್ದಮೆಗಳನ್ನು ಮಾತ್ರ ವಿಚಾರಿಸುತ್ತದೆ. ಸ್ಥಳೀಯ ಆಡಳಿತದ ಘಟಕ ಕೌಂಟಿ.   ಕೌಂಟಿಯ ಆಡಳಿತಾಧಿಕಾರಿ ಕಮಿಷನರ್; ಅವನನ್ನು ಗವರ್ನರ್ ನೇಮಕ ಮಾಡುತ್ತಾನೆ.  ರಾಜ್ಯದಲ್ಲಿ 46 ಕೌಂಟಿಗಳು ಹಾಗೂ ಅವುಗಳಿಗೆ ಸೇರಿದ ಪಟ್ಟಣಗಳು ಇವೆ.

ಶಿP್ಪ್ಷಣ : ಪ್ರಾಥಮಿಕ ಶಿಕ್ಷಣ ಕಡ್ಡಾಯ.  ಪ್ರೌಢ ಹಾಗೂ ವೃತ್ತಿ ಶಿಕ್ಷಣಗಳಿಗೆ ಅನೇಕ ಶಾಲೆಗಳು ಹಾಗೂ ಕಾಲೇಜುಗಳುಂಟು.  ರಾಜ್ಯದ ಎರಡು ವಿಶ್ವವಿದ್ಯಾಲಯಗಳು ದಕ್ಷಿಣ ಕ್ಯಾರಲೈನ ವಿಶ್ವವಿದ್ಯಾಲಯ ಮತ್ತು ಕ್ಲೆಮ್ಸನ್ ವಿಶ್ವವಿದ್ಯಾಲಯ.
ಆರ್ಥಿಕತೆ : ಬೇಸಾಯಕ್ಕೆ ಒದಗಿ ಬಂದಿರುವ ಭೂಮಿ ತೀರ ಕಡಿಮೆ.  ಇಲ್ಲಿಯ ಪ್ರಧಾನ ಬೆಳೆಗಳು ಹತ್ತಿ, ಹೊಗೆಸೊಪ್ಪು, ಸೋಯಾಬೀನ್ಸ್, ಮತ್ತು ಮುಸುಕಿನ ಜೋಳ. 

ರಾಜ್ಯದ  ಭೂಮಿಯಲ್ಲಿ 62% ಅರಣ್ಯ.  ಎರಡು ರಾಷ್ಟ್ರೀಯ ಅರಣ್ಯಗಳಿವೆ.  ಫ್ರಾನ್ಸಿಸ್ ಮರಿಯ ಅರಣ್ಯದ ವಿಸ್ತೀರ್ಣ 4,14,700 ಎಕರೆ.  ಸುಮ್ಟರ್ ಅರಣ್ಯ 14,06,904 ಎಕರೆ ವಿಸ್ತಾರವಾಗಿದೆ.  ರಾಜ್ಯ ಅರಣ್ಯಗಳ ಸಂಖ್ಯೆ 6.

ರಾಜ್ಯದಲ್ಲಿ ಚೌಬೀನೆ, ಹತ್ತಿ, ರಾಸಾಯನಿಕ, ಕಾಗದ ಹಾಗೂ ಸಿಮೆಂಟ್ ಕಾರ್ಖಾನೆಗಳಿವೆ.  ಸವಾನ ನದಿಯ ದಂಡೆಯ ಮೇಲೆ ಅಮೆರಿಕದ ಪರಮಾಣು ಶಕ್ತಿ ಉತ್ಪಾದನೆಯ ದೊಡ್ಡ ಸಂಸ್ಥೆ ಇದೆ.  ಪರಮಾಣು ಅಸ್ತ್ರಗಳಿಗೆ ಅಗತ್ಯವಾದ ಪ್ಲುಟೋನಿಯಂ ಇಲ್ಲಿ ಉತ್ಪಾದನೆಯಾಗುತ್ತದೆ.  ರಾಜ್ಯದಲ್ಲಿ ದೊರಕುವ ಖನಿಜಗಳಲ್ಲಿ ಪ್ರಧಾನವಾದ್ದು ಕೊಲಿನ್ ಮತ್ತು ಇತರ ಬಗೆಯ ಜೇಡಿಮಣ್ಣು.

ಸಾರಿಗೆ ಸಂಪರ್ಕ :  ದಕ್ಷಿಣ ಕ್ಯಾರಲೈನದಲ್ಲಿ 17 ರೈಲ್ವೆ ಕಂಪನಿಗಳಿವೆ.  ರಾಜ್ಯದ ಹೆದ್ದಾರಿಗಳ ಒಟ್ಟು ಉದ್ದ 59,726ಮೈ (1974).  ಇವು ಸುವ್ಯವಸ್ಥಿತವಾಗಿವೆ.  ಐದು ವಿಮಾನ ಮಾರ್ಗಗಳ ಮೂಲಕ ವಿವಿಧ ನಗರಗಳಿವೆ ವಾಣಿಜ್ಯ ಹಾಗೂ ಸಂಚಾರ ಸಂಪರ್ಕವುಂಟು.  ಚಾಲ್ರ್ಸ್‍ಟನ್ ಪ್ರಧಾನ ಬಂದರು.  ಅಲ್ಲಿಂದ ಇತರ ಪ್ರಮುಖ ಸ್ಥಳಗಳಿಗೆ ಜಲಯಾನ ಸೌಲಭ್ಯವುಂಟು. ಮತ್ತೊಂದು ಪ್ರಮುಖ ಬಂದರು ಜಾರ್ಜ್‍ಟೌನ್.  
(ವಿ.ಜಿ.ಕೆ.; ಸಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ